ಸೈಯದ್ ಅಹಮದ್ ಖಾನ್
	1817-98. ಭಾರತದ ಪ್ರಸಿದ್ಧ ಅಲಿಘರ್ ಚಳವಳಿ ಸಂಸ್ಥಾಪಕ ಹಾಗೂ ಮುಸ್ಲಿಂ ಸುಧಾರಣಾ ಚಳವಳಿಯ ನಾಯಕ. 1817ರಲ್ಲಿ ದೆಹಲಿಯಲ್ಲಿ ಜನಿಸಿದ ಈತ ಭಾರತದ ಪ್ರಥಮ ಸ್ವಾಂತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಈಸ್ಟ್ ಇಂಡಿಂiÀi ಕಂಪನಿಯ ಅಧೀನ ನ್ಯಾಯಾಧೀಶನಾಗಿ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯಿಂದಿದ್ದು, ಆಂಗ್ಲರ ವಿಶ್ವಾಸವನ್ನು ಮುಸ್ಲಿಮರ ಸೇವೆಗೆ ಬಳಸಿಕೊಂಡ. ಆಂಗ್ಲರ ಮತ್ತು ಮುಸ್ಲಿಮರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸುವುದು ಇವನ ಮುಖ್ಯಗುರಿಯಾಗಿತ್ತು. ಮುಸ್ಲಿಮರಿಗೆ ಆಧುನಿಕ ಶಿಕ್ಷಣ ದೊರೆಯುವಂತೆ ಮಾಡಲು ಅವರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಲು ಇದಕ್ಕಾಗಿ ಮೊರಾದಾಬಾದ್, ಘಾಜಿಪುರಗಳಲ್ಲಿ ಮದರಸಗಳನ್ನು ಸ್ಥಾಪನೆ ಮಾಡಿದ (1864). ಆಂಗ್ಲಭಾಷೆಯ ಉತ್ತಮ ಕೃತಿಗಳನ್ನು ಉರ್ದುಭಾಷೆಗೆ ಭಾಷಾಂತರಿಸಲು ಭಾಷಾಂತರ ಸೊಸೈಟಿ ಸ್ಥಾಪಿಸಿದ (1864). ಅನಂತರ ಇದನ್ನು ಅಲಿಘರ್ ಸೈಂಟಿಫಿಕ್ ಸೊಸೈಟಿ ಎಂದು ಪುನರ್‍ನಾಮಕರಣ ಮಾಡಿದ(1865). ಇವನು ಲಂಡನ್ನಿಗೆ ಭೇಟಿ ನೀಡಿ ಹಿಂದಿರುಗಿದ ಅನಂತರ ಅಲಿಘರ್‍ನಲ್ಲಿದ್ದ ಶಾಲೆಯನ್ನು ಮಹಮಡನ್ ಆಂಗ್ಲೋ-ಓರಿಯಂಟಲ್ ಕಾಲೇಜ್ ಆಗಿ ಪರಿವರ್ತಿಸಿದ(1877 ಜನವರಿ). ಸ್ವತಃ ಲಿಟ್ಟನ್ನನೇ ಈ ಕಾಲೇಜಿಗೆ ಅಡಿಗಲ್ಲು ಹಾಕಿದ. ಸರ್ ಥಿಯೋಡರ್ ಬೇಕ್ ಎಂಬಾತ ಈ ಕಾಲೇಜಿನ ಮೊದಲ ಪ್ರಿನ್ಸಿಪಾಲ್ ಆಗಿದ್ದ. ಇವನು ಅಲಿಘರನ್ನು ಅತ್ಯಲ್ಪ ಕಾಲಾವಧಿಯಲ್ಲಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕøತಿಕ ಕೇಂದ್ರವಾಗಿ ಪರಿವರ್ತಿಸಿದ. ಇದು ಮುಂದೆ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ ಆಯಿತು(1920). ಇವನು ಮುಸ್ಲಿಂ ಸಮುದಾಯದ ಕಂದಾಚಾರಗಳನ್ನು ಖಂಡಿಸಿ, ಪ್ರಗತಿಪರ ಸುಧಾರಣೆಗಳನ್ನು ಜಾರಿಗೊಳಿಸಿಲು ಪ್ರಯತ್ನಿಸಿದ. ಅದಕ್ಕಾಗಿ ತಹಜಿಬ್-ಅಲ್-ಅಖ್ಲಾಖ್, ಕಾಮೆಂಟರಿಸ್ ಆನ್ ದ ಕುರಾನ್ ಎಂಬ ಗ್ರಂಥಗಳನ್ನು ರಚಿಸಿದ. ಕುರಾನ್‍ನ ಅಧ್ಯಯನಕ್ಕೆ ಒತ್ತುಕೊಟ್ಟು ಸಮುದಾಯದ ಸೇವೆಗೆ ಅಂಜುಮಾನ್(ಸೊಸೈಟಿಗಳು) ಸಂಸ್ಥೆಗಳನ್ನು ಸ್ಥಾಪಿಸಿದುದರ ಜೊತೆಗೆ ಪತ್ರಿಕೋದ್ಯಮವನ್ನು ಹುಟ್ಟುಹಾಕಿದ. ಈ ಬಗೆಯ ಚಟುವಟಿಕೆಗಳಿಂದ ಭಾರತೀಯ ಮುಸ್ಲಿಮ್ ಮಹಿಳೆಯರಲ್ಲೂ ಸುಧಾರಣೆಗಳು ಕಂಡುಬಂದುವು. ಅಖಿಲ-ಭಾರತ ಮುಸ್ಲಿಮ್ ಮಹಿಳಾ ಸಮ್ಮೇಳನಗಳು ಆರಂಭಗೊಂಡವು(1914ರ ಅನಂತರ). ಅಲಿಘರ್ ಚಳವಳಿ ಮುಸ್ಲಿಮ್ ಸಮುದಾಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದರೂ ಕಾಲಾನಂತರದಲ್ಲಿ ಅಂಥ ವಿಶಾಲದೃಷ್ಟಿ ಕ್ಷೀಣಿಸತೊಡಗಿತು. ಮತೀಯತೆ ತಲೆಹಾಕತೊಡಗಿತು. ಅನಂತರದಲ್ಲಿ ಈ ಚಳವಳಿ ಭಾರತೀಯ ರಾಷ್ಟ್ರೀಯತೆಯನ್ನು ವಿರೋಧಿಸಿದ್ದಲ್ಲದೆ, ಹಿಂದುಗಳ ವಿಚಾರವನ್ನೂ ಭಾರತ ರಾಷ್ಟ್ರೀಯ ಕಾಂಗ್ರೆಸ್ ವಿಚಾರಗಳನ್ನೂ ವಿರೋಧಿಸತೊಡಗಿತು. ಇವನು ಯುನೈಟೆಡ್ ಇಂಡಿಯನ್ ಪೇಟ್ರಿಯಾಟಿಕ್ ಅಸೋಸಿಯೇಷನ್(1888), ಅಪ್ಪರ್ ಇಂಡಿಯ ಮಹಮಡನ್ ಆಂಗ್ಲೋ ಓರಿಯಂಟಲ್ ಡಿಫೆನ್ಸ್ ಅಸೋಸಿಯೇಷನ್ ಎಂಬ ಸಂಘವನ್ನು ಸ್ಥಾಪಿಸಿದ್ದ (1893). ಗವರ್ನರ್ ಜನರಲ್‍ನ ಕೇಂದ್ರಶಾಸನ ಸಭೆ ಸದಸ್ಯನಾಗಿದ್ದ ಈತ ತನ್ನ ಕಾರ್ಯಸಾಧನೆಗಳಿಗಾಗಿ ನೈಟ್ ಪದವಿ ಪಡೆದ (1888). ಇವನು 1898ರಲ್ಲಿ ನಿಧನಹೊಂದಿದ. ಇವನ ವಿಚಾರಗಳು, ನೀತಿಗಳು ಮುಂದಿನ ಮುಸ್ಲಿಮ್ ರಾಜಕೀಯಕ್ಕೆ ಅಡಿಗಲ್ಲಾದುವು; ಅಲ್ಲದೆ ಎರಡು ರಾಷ್ಟ್ರಗಳ ಸಿದ್ಧಾಂತಕ್ಕೆ ಬೀಜಾಂಕುರ ಮಾಡಿದುವು. ಈತ ಭಾರತೀಯ ಇಸ್ಲಾಮ್‍ನ ವೃದ್ಧಪಿತಾಮಹನೆಂಬ ಹೊಗಳಿಕೆಗೆ ಪಾತ್ರನಾಗಿದ್ದಾನೆ.					
		(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ